ಪ್ರಾಣಿಗಳಲ್ಲಿ ವರ್ಣವಿನ್ಯಾಸ

ಜೀವಜಗತ್ತಿನಲ್ಲಿ ಕಂಡುಬರುವ ಪ್ರಮುಖ ಲಕ್ಷಣ ನಿರಂತರ ಹೋರಾಟ. ಪ್ರತಿಯೊಂದು ಪ್ರಾಣಿಯೂ ಬದುಕುಳಿಯಲು ಇಂಥ ಹೋರಾಟದಲ್ಲಿ ನಿರತವಾಗಿರುತ್ತದೆ. ಜೊತೆಯ ಪ್ರಾಣಿಗಳೊಡನೆ ಅಥವಾ ನಿಸರ್ಗದೊಂದಿಗೆ ಆಹಾರಕ್ಕಾಗಿ, ಆಶ್ರಯಕ್ಕಾಗಿ, ಸಂಗಾತಿಗಾಗಿ ನಡೆಯುವ ಸ್ಪರ್ಧೆಯೇ ಈ ಹೋರಾಟ. ಪ್ರತಿಯೊಂದು ಪ್ರಾಣಿಯೂ ಶತ್ರುಗಳಿಂದ ರಕ್ಷಿಸಿಕೊಳ್ಳಬೇಕು, ಪ್ರಕೃತಿಯ ಪ್ರತಿಕೂಲ ವಾತಾವರಣವನ್ನು ತಾಳಿಕೊಳ್ಳಬೇಕು. ಇದಕ್ಕಾಗಿ ಅದು ತನ್ನದೇ ಆದ ರೀತಿಯಲ್ಲಿ ಪರಿಹೊಂದಾಣಿಕೆ ಮಾಡಿಕೊಳ್ಳುತ್ತದೆ. ತನಗಿಂತ ಬಲಶಾಲಿಗಳಾದ ಶತ್ರುಗಳನ್ನು ಶಕ್ತಿಯಿಂದ ಎದುರಿಸುವುದು ಸಾಧ್ಯವಿಲ್ಲವಿದ್ದಾಗ ಯುಕ್ತಿಗಳನ್ನು ಅನುಸರಿಸಬೇಕು. ಇಂಥ ಹೊಂದಾಣಿಕೆಗಳಲ್ಲಿ ವರ್ಣವಿನ್ಯಾಸವೂ (ಕಲರೇಷನ್) ಒಂದು; ಪರಿಸರದೊಂದಿಗೆ ಸ್ಥಿರತೆಯನ್ನು ಸಾಧಿಸಲು ಇದು ನೆರವಾಗುತ್ತದೆ. ಶತ್ರುಗಳಿಂದ ತಪ್ಪಿಸಿಕೊಳ್ಳಲು ಕೆಲವು ಪ್ರಾಣಿಗಳು ತಮ್ಮ ಪರಿಸರದ ಹಿನ್ನೆಲೆಯಲ್ಲಿ ಅಡಗಿ ಅದಕ್ಕೆ ಅನುಗುಣವಾದ ವರ್ಣವೈವಿಧ್ಯವನ್ನು ಬೆಳೆಸಿಕೊಳ್ಳತ್ತವಾದರೆ ಇನ್ನು ಕೆಲವಲ್ಲಿ ಎದ್ದು ಕಾಣುವ ವರ್ಣವೈವಿಧ್ಯ ಕಾಣದೊರೆಯುತ್ತದೆ. ಇವೆಲ್ಲಕ್ಕೂ ಕಾರಣಗಳುಂಟು.

ಪ್ರಾಣಿಗಳ ವರ್ಣವಿನ್ಯಾಸ ಡಾರ್ವಿನ್ನನ ಕಾಲದಿಂದಲೂ ವಿಕಾಸತಜ್ಞರ ಆಸಕ್ತಿಯನ್ನು ಕೆರಳಿಸಿದೆ. ತಾವು ವಾಸಿಸುವ ಪರಿಸರದ ಹಿನ್ನೆಲೆಯಲ್ಲಿ ತಮ್ಮ ದೇಹದ ವರ್ಣವೈವಿಧ್ಯದಿಂದ ಶತ್ರುಗಳ ಕಣ್ಣಿಗೆ ಬೀಳದಂತೆ ಮರೆಮಾಚಿಕೊಳ್ಳುತ್ತವೆ ಎಂಬುದು ಎಷ್ಟರಮಟ್ಟಿಗೆ ವೈಜ್ಞಾನಿಕ ದೃಷ್ಟಿಯಿಂದ ಸರಿ. ಅಥವಾ ಇದು ಕೇವಲ ಆಕಸ್ಮಿಕವೆ ? ಉದಾಹರಣೆಗೆ ತನ್ನ ಹಿನ್ನೆಲೆಗೆ ಅನುಗುಣವಾಗಿ ಬಣ್ಣವನ್ನು ಬದಲಾಯಿಸಿಕೊಳ್ಳುವ ಚಪ್ಪಟೆಮೀನನ್ನು ನೋಡಿದರೆ ಇದು ಆಕಸ್ಮಿಕ ಮತ್ತು ಕಾಲ್ಪನಿಕ ಎಂದು ತರ್ಕಿಸುವುದು ಸಾಧ್ಯವಿಲ್ಲ. ವಾಸ್ತವವಾಗಿ ಅನೇಕ ಪ್ರಾಣಿಗಳ ದೃಷ್ಟಿ ನಮ್ಮದಕ್ಕಿಂತ ತುಂಬ ಭಿನ್ನವಾಗಿದೆ. ಪ್ರಾಣಿಗಳ ಬಣ್ಣಕ್ಕೆ ಒಂದು ಉದ್ದೇಶ ಇದೆ ಎನ್ನುವುದಾದರೆ ಮತ್ತು ರಕ್ಷಣೆಯನ್ನು ಒದಗಿಸಿಕೊಡುವುದೇ ಈ ಉದ್ದೇಶ ಎನ್ನುವುದನ್ನು ಒಪ್ಪಿಕೊಳ್ಳುವುದಾದರೆ. ವಿಕಾಸ ಅದನ್ನು ಹೇಗೆ ಉಂಟುಮಾಡಿತು ಎಂಬ ಪ್ರಶ್ನೆ ಮೂಡುತ್ತದೆ. ಇದಕ್ಕೆ ಉತ್ತರ ಅಷ್ಟು ಸುಲಭಸಾಧ್ಯವಲ್ಲ.

ಹಿನ್ನಲೆಯನ್ನನುಸರಿಸಿ ಪ್ರಾಣಿಗಳು ಬಣ್ಣ ಬದಲಾಯಿಸುವ ವಿಷಯ ಅತಿ ಹಿಂದಿನಿಂದಲೂ ತಿಳಿದಿತ್ತು. ಗೋಸುಂಬೆ ಬಣ್ಣ ಬದಲಾಯಿಸುವುದನ್ನು ವಿಜ್ಞಾನದ ಪಿತಾಮಹನೆಂದು ಹೆಸರಾದ ಅರಿಸ್ಟಾಟಲ್ ಕರಾರುವಾಕ್ಕಾಗಿ ವಿವರಿಸಿದ್ದಾನೆ. ಆದರೆ ಈ ಬಣ್ಣ ಬದಲಾಗುವ ಪ್ರಕ್ರಿಯೆ ಮತ್ತು ಅದು ಒಳಗೊಳ್ಳಬಹುದಾದ ಶಾರೀರಿಕ ಕ್ರಿಯಾವಿಧಾನಗಳ ಬಗೆಗೆ ಆಸಕ್ತಿಮೂಡಿ ಸಂಶೋಧನೆ ಆರಂಭವಾದುದು ಕೇವಲ ಇತ್ತೀಚಿಗೆ. 1819ರಲ್ಲಿ ಸ್ಯಾಮ್‍ಗಿಯೊವ್ಯಾನಿ ಎಂಬಾತ ಶಿರಪಾದಿಗಳಲ್ಲಿ ವರ್ಣಕ ಕೋಶಗಳನ್ನು ಮತ್ತು ಅವುಗಳ ವರ್ತನೆಯನ್ನು ವೀಕ್ಷಿಸಿ ಅವಕ್ಕೆ ಕ್ರೊಮ್ಯಾಟೊಫೋರುಗಳೆಂಬ ಹೆಸರುಕೊಟ್ಟ. ಅನಂತರ 1834ರಲ್ಲಿ ಮಿಲನೆ ಮತ್ತು ಎಡ್ವಡ್ರ್ಸ್ ಎಂಬವರು ಸರೀಸೃಪಗಳಲ್ಲಿ ಇವನ್ನು ಅಭ್ಯಸಿಸಿ ವಿವರಿಸಿದರು. 1852ರಲ್ಲಿ ಬ್ರೂಕ್ ಎಂಬಾತ ಆಫ್ರಿಕ ಗೋಸುಂಬೆಯಲ್ಲಿ ಬಣ್ಣಬದಲಾವಣೆ ಎಂಬ ಏಕವಿಷಯಕ ಗ್ರಂಥದಲ್ಲಿ ಮೊದಲಬಾರಿಗೆ ಈ ವಿಷಯವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ. ಅದರಲ್ಲಿ ಆತ ಕ್ರೊಮ್ಯಾಟೊಫೋರುಗಳ ಪ್ರತಿಕ್ರಿಯೆಯನ್ನು ವಿಶದವಾಗಿ ಚರ್ಚಿಸಿ ವರ್ಣವೈವಿಧ್ಯದ ಅಭ್ಯಾಸಕ್ಕೆ ಅಡಿಪಾಯ ಹಾಕಿದ್ದಾನೆ. ಅವುಗಳ ವರ್ತನೆಯನ್ನು ಪರಿಸರ ಮತ್ತು ಪ್ರಾಣಿಯ ನರಮಂಡಲಗಳು ನಿಯಂತ್ರಿಸುತ್ತವೆ ಎಂಬ ಭಾವನೆ ಬಹಳ ಕಾಲ ಪ್ರಚಲಿತವಾಗಿತ್ತು. ಆದರೆ ಕ್ರೊಮ್ಯಾಟೊಫೋರುಗಳ ಪ್ರತಿಕ್ರಿಯೆಯನ್ನು ಹಾರ್ಮೋನುಗಳು ನಿಯಂತ್ರಿಸುತ್ತವೆ ಎಂಬ ವಿಷಯ 1898ರಲ್ಲಿ ತಿಳಿಯಿತು. ಅಲ್ಲಿಂದೀಚೆಗೆ ಕಠಿಣಚರ್ಮಗಳಲ್ಲಿ ಈ ವಿದ್ಯಮಾನದ ಸಾದ್ಯಂತ ಅಭ್ಯಾಸ ನಡೆದು ವಿವರಣೆ ದೊರೆತಿದೆ. ವರ್ಣವೈವಿಧ್ಯದ ವಿಷಯ ತಿಳಿದುಕೊಳ್ಳಲು ತೊಡಗುವ ಅಭ್ಯಾಸದಲ್ಲಿಯ ಮೊದಲ ಪ್ರಶ್ನೆ ಎಂದರೆ ಪ್ರಾಣಿಗಳಲ್ಲಿ ಬಣ್ಣ ಉತ್ಪತ್ತಿಯಾಗುವುದು ಹೇಗೆ ?
ಪ್ರಾಣಿಗಳಲ್ಲಿ ಬಣ್ಣದ ಉತ್ಪಾದನೆಯಲ್ಲಿ ಎರಡು ವಿಧಾನಗಳುಂಟು :

1 ರಾಸಾಯನಿಕ, 2 ಭೌತಿಕ.

ರಾಸಾಯನಿಕ ವಿಧಾನ : ಯಾವುದೇ ಪ್ರಾಣಿಯ ಬಣ್ಣಕ್ಕೆ ಕಾರಣವಾಗುವ ವಸ್ತು ಅದರ ದೇಹದ ಎಲ್ಲ ಭಾಗಗಳಲ್ಲೂ ಕಂಡುಬರುತ್ತದೆ. ವರ್ಣಕಗಳು ಜೀವಕೋಶಗಳಲ್ಲಿ ಸ್ಥಿತವಾಗಿದ್ದು ರಾಸಾಯನಿಕ ಬಣ್ಣವನ್ನು ಉಂಟುಮಾಡುತ್ತವೆ. ಉದಾಹರಣೆಗೆ ಕಶೇರುಕಗಳ ಕೆಂಪುರಕ್ತಕಣಗಳಲ್ಲಿರುವ ಕಬ್ಬಿಣವನ್ನೊಳಗೊಂಡ ಹೀಮೊಗ್ಲಾಬಿನ್ ಎಂಬುದು ರಕ್ತಕ್ಕೆ ಕೆಂಪು ಬಣ್ಣವನ್ನೂ ಅಷ್ಟಪಾದಿ ಮುಂತಾದ ಅಕಶೇರುಕಗಳಲ್ಲಿರುವ ಹೀಮೊಸೈಯಾನಿಸ್ ಎಂಬ ವರ್ಣಕ ನೀಲಿಬಣ್ಣವನ್ನೂ ಕೊಡುತ್ತವೆ. ಆದರೆ ಆಯಾ ಪ್ರಾಣಿಗೆ ಈ ವರ್ಣಕಗಳು ಆಕ್ಸಿಜನ್ ಅನಿಲವನ್ನು ಹೊತ್ತು ಸಾಗಿಸಲು ಸೀಮಿತವಾದ ಶ್ವಾಸಕ್ರಿಯೆಗೆ ಸಂಬಂಧಿಸಿದವಾಗಿದ್ದು ಬೇರೆ ಯಾವ ಕಾರ್ಯಕ್ಕೂ ಮುಖ್ಯವಲ್ಲ.

ವರ್ಣಕ ದೇಹದ ಹೊರಬಾಗದಲ್ಲಿದ್ದು ಜೀವಿಗೆ ಉಪಯುಕ್ತವಾಗುವ ಬಣ್ಣವನ್ನು ಉಂಟುಮಾಡುವುದು. ಇಂಥ ವರ್ಣಕಗಳೇ ಕ್ರೊಮ್ಯಾಟೊಫೋರುಗಳು. ಇವುಗಳಲ್ಲಿ ಎರಡು ವಿಧ : ಸರಳ ವರ್ಣಕ ಮತ್ತು ಪರಿವರ್ತನಾ ವರ್ಣಕ. ಸರಳ ವರ್ಣಕಗಳು ಪ್ರಾಣಿಯಲ್ಲಿ ಶಾಶ್ವತ ಬಣ್ಣವನ್ನು ಉತ್ಪತ್ತಿಮಾಡುತ್ತವೆ. ಆದರೆ ಪರಿವರ್ತನಾ ವರ್ಣಕ ಗೋಸುಂಬೆ ಅಥವಾ ಕಠಿಣಚರ್ಮಗಳಂಥ ಪ್ರಾಣಿಗಳಲ್ಲಿ ಚರ್ಮದ ಮೇಲೆ ಹಾದುಹೋಗುವ ವರ್ಣಪ್ರವಾಹಕ್ಕೆ ಕಾರಣವಾಗುತ್ತದೆ. ಪರಿವರ್ತನಾ ವರ್ಣಕಗಳನ್ನೊಳಗೊಂಡ ಜೀವಕೋಶಗಳು ಚರ್ಮದ ಮೇಲ್ಮೈಗೆ ಸಮಾಂತರವಾಗಿ ಸಮತಲದಲ್ಲಿ ಹರಡಿದ ಪ್ರಸರಿತ ತುಂತುಗಳನ್ನೊಳಗೊಂಡಿರುತ್ತವೆ. ತಂತುಗಳು ವಿಸ್ತøತಗೊಂಡಾಗ ವರ್ಣಕ ಆಳದಲ್ಲಿದ್ದು ಕೇವಲ ಸ್ವಲ್ಪ ಭಾಗ ಮಾತ್ರ ಗೋಚರಿಸುತ್ತದೆ. ಆದರೆ ತಂತುಗಳು ಸಂಕೋಚಿಸಿದಾಗ ವರ್ಣಕ ಕೋಶದ ಮೇಲ್ಮೈಯ ಹೆಚ್ಚು ಭಾಗದಲ್ಲಿ ಹರಡಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತದೆ.
ಕಶೇರುಕಗಳಲ್ಲಿ ಕ್ರೊಮ್ಯಾಟೊಫೋರುಗಳು ನರಶಿಖೆಗಳಿಂದ ಉದ್ಭವಿಸಿ ಅನಂತರ ತಮ್ಮ ಭವಿಷ್ಯದ ನೇಮಿತ ತಾಣಕ್ಕೆ ಚಲಿಸುತ್ತವೆ. ಕ್ರೊಮ್ಯಾಟೊಫೋರ್ ಪದವನ್ನು ವರ್ಣಕಗಳೆಲ್ಲಕ್ಕೂ ಉಭಯ ಸಾಮಾನ್ಯವಾಗಿ ಬಳಸಿದರೂ ಕೆಂಪು, ಹಳದಿ ಅಥವಾ ಬೂದು ಕಪ್ಪು ವರ್ಣಕಗಳನ್ನುಳ್ಳ ವರ್ಣಕೋಶಗಳನ್ನು ಅನುಕ್ರಮವಾಗಿ ಎರಿತ್ರೊಫೋರ್, ಕ್ಸಾಂತೋಫೋರ್ ಮತ್ತು ಮೆಲನೊಫೋರುಗಳೆಂದು ಕರೆಯುವುದು ವಾಡಿಕೆ.

ಅವುಗಳಲ್ಲಿರುವ ಬಣ್ಣವಸ್ತುವನ್ನನುಸರಿಸಿ ಕ್ರೊಮ್ಯಾಟೊಫೋರುಗಳನ್ನು ಮೆಲನೊಫೋರ್, ಲಿಪೊಫೊರ್ ಮತ್ತು ಗುವಾನೊಫೋರುಗಳೆಂದು ವರ್ಗೀಕರಿಸಬಹುದು.

1. ಮೆಲನೊಫೋರುಗಳು : ದಟ್ಟ ಬೂದು ಅಥವಾ ಕಪ್ಪು ಬಣ್ಣವನ್ನೊಳಗೊಂಡಿರುತ್ತವೆ. ಇವು ಕೆಲವು ಪ್ರಾಣಿಗಳಲ್ಲಿ ಸಣ್ಣಗಾತ್ರದವಾಗಿದ್ದರೆ ಇನ್ನು ಕೆಲವು ಪ್ರಾಣಿಗಳಲ್ಲಿ ದೊಡ್ಡಗಾತ್ರದವಾಗಿರುವುವು. ಇವಕ್ಕೆ ಅನುಕ್ರಮವಾಗಿ ಮೈಕ್ರೊಮೆಲನೊಫೋರುಗಳು ಮತ್ತು ಮ್ಯಾಕ್ರೊಮೆಲನೊಫೋರುಗಳೆಂದು ಹೆಸರು.
2 ಲಿಪೊಫೋರುಗಳು : ಆಲ್ಕೊಹಾಲಿನಲ್ಲಿ ವಿಲೀನವಾಗುವ ಇವು ಕೆಂಪು ಅಥವಾ ಹಳದಿ ವರ್ಣಕಗಳನ್ನೊಳಗೊಂಡಿವೆ.
3 ಗುವಾನೊಪೋರುಗಳು : ಗುವಾನಿನ್ ಅಥವಾ ಗುವಾನಿನ್ ಹೋಲುವ ವಸ್ತುಗಳನ್ನೊಳಗೊಂಡಿವೆ.
ಕ್ರೊಮ್ಯಾಟೊಪೋರುಗಳು ಯಾವುದಾದರೂ ಒಂದೇ ಒಂದು ರೀತಿಯ ವರ್ಣಕವನ್ನು ಒಳಗೊಂಡಿದ್ದರೆ ಇಂಥವನ್ನು ಏಕವರ್ಣಕ (ಮಾನೊಕ್ರೊಮ್ಯಾಟಿಕ್) ಕ್ರೊಮ್ಯಾಟೊಪೋರುಗಳೆಂದು ಕರೆಯಲಾಗುತ್ತದೆ. ಇನ್ನು ಕೆಲವು ಬಗೆಗಳಲ್ಲಿ ಒಂದಕ್ಕಿಂತ ಹೆಚ್ಚು ವಿಧದ ವರ್ಣಕಗಳಿದ್ದು ಅವುಗಳ ಸಂಯೋಗದಿಂದ ಏಕವರ್ಣ ಫಲಿತಾಂಶ ಉಂಟಾಗಬಹುದು. ಇಂಥವು ಬಹುವರ್ಣಕ (ಪಾಲಿಕ್ರೊಮ್ಯಾಟಿಕ್) ಮೆಲನೊಪೋರುಗಳು. ಇವನ್ನು ಪುನಃ ದ್ವಿವರ್ಣಕ (ಕಪ್ಪು ಮತ್ತು ಕೆಂಪು), ತ್ರಿವರ್ಣಕ (ಕಪ್ಪು, ಕೆಂಪು ಮತ್ತು ಹಳಿದ), ಚತುರ್ವರ್ಣಕ (ಕೆಂಪು, ಕಪ್ಪು, ಹಳದಿ ಮತ್ತು ಬಿಳುಪು) ಇತ್ಯಾದಿಯಾಗಿ ವಿಂಗಡಿಸಬಹುದು. ಕ್ರ್ಯಾಗ್ನಾನ್ ಎಂಬ ಶ್ರಿಂಪ್ ಪ್ರಾಣಿಯಲ್ಲಿ ನಾಲ್ಕೂ ರೀತಿಯ ಕ್ರೊಮ್ಯಾಟೊಪೋರುಗಳಿವೆ. ಬಹುವರ್ಣಕ ಕ್ರೊಮ್ಯಾಟೊಫೋರುಗಳನ್ನು ಸಾಮಾನ್ಯವಾಗಿ ಕಠಿಣಚರ್ಮಿಗಳು, ಉಭಯಚರಿಗಳು ಮತ್ತು ಮೀನುಗಳಲ್ಲಿ ಕಾಣಬಹುದು.

ಕ್ರೊಮ್ಯಾಟೊಪೋರುಗಳ ಮೂಲಕ ವರ್ಣವ್ಯತ್ಯಾಸಗಳನ್ನು ತೋರುವ ಮುಖ್ಯ ಪ್ರಾಣಿಗುಂಪುಗಳೆಂದರೆ ಶಿರಪಾದಿಗಳು, ಕಠಿಣಚರ್ಮಿಗಳು, ಮೀನುಗಳು, ಉಭಯಚರಿಗಳು ಮತ್ತು ಸರೀಸೃಪಗಳು.

ಭೌತಿಕ ವಿಧಾನ : ಪ್ರಾಣಿಯ ಮೇಲ್ಮೈಯ ವಿಶಿಷ್ಟ ರಚನೆಯಿಂದಾಗಿ ಬಣ್ಣ ಉತ್ಪತ್ತಿಯಾಗುತ್ತದೆ. ಪ್ರಾಣಿಯ ಮೇಲೆ ಬೆಳಕಿನ ಕಿರಣ ಬಿದ್ದಾಗ ಅದು ಅಂತರ್ಗತಾಂಶಗಳಾಗಿ ಹರಡುತ್ತದೆ. ಚಿಟ್ಟೆಗಳ ರೆಕ್ಕೆಯ ಹುರುಪೆಗಳಲ್ಲಿ ಮತ್ತು ಝೇಂಕಾರ ಪಕ್ಷಿಯ ಗರಿಗಳಲ್ಲಿ ಇಂಥ ವಿದ್ಯಮಾನವನ್ನು ನೋಡಬಹುದು. ಉಷ್ಣವಲಯದ ಮಾರ್ಫೊ ಚಿಟ್ಟೆ ನೀಲಿಯಿಂದ ಹಸುರು ಛಾಯೆಗೆ ಮತ್ತು ರತ್ನಕಂಠದ ಝೇಂಕಾರ ಪಕ್ಷಿಯ ಮತ್ತು ಪಾರಿವಾಳ ಹಕ್ಕಿಯ ಕತ್ತು ಕೆಂಪಿನಿಂದ ಹಸುರು ಬಣ್ಣಕ್ಕೆ ತಿರುಗುವುವು. ಇದು ಬಣ್ಣದ ಹರಡುವಿಕೆಗೆ ಉದಾಹರಣೆ.

ಪ್ರಾಣಿಗಳ ವರ್ಣವೈವಿಧ್ಯಕ್ಕೆ ನಿಜವಾಗಿಯೂ ಜೀವವೈಜ್ಞಾನಿಕ ಪ್ರಾಶಸ್ತ್ಯ ಇದೆಯೆ? ಇದ್ದರೆ ಏನು? ಎಂಬುದು ವಿಚಾರಾರ್ಹ. ಸ್ಥೂಲವಾಗಿ ಪ್ರಾಣಿಗಳ ಬಣ್ಣವನ್ನು ತಟಸ್ಥ ಬಣ್ಣ ಮತ್ತು ಅಮೂಲ್ಯ ಬಣ್ಣ ಎಂದು ವರ್ಗೀಕರಿಸಬಹುದು.
ತಟಸ್ಥ ಬಣ್ಣ : ಈ ಬಣ್ಣಗಳಿಗೆ ಪ್ರಕೃತಿಯಲ್ಲಿ ಆಯ್ಕೆಯ ಮಹತ್ತ್ವ ಇಲ್ಲ. ಹಿಂದೆ ಬದುಕಿದ್ದ ಪೂರ್ವಜ ಪ್ರಾಣಿಗಳಲ್ಲಿ ಆಗಿನ ಪರಿಸರಕ್ಕೆ ಸಂಬಂಧಿಸಿದಂತೆ ತಟಸ್ಥ ಬಣ್ಣಕ್ಕೆ ಪ್ರಾಶಸ್ತ್ಯ ಇದ್ದಿರಬಹುದು. ಅವು ಯಥಾವತ್ತಾಗಿ ಅನುವಂಶೀಯವಾಗಿ ಬಂದಿರಲೂಬಹುದು. ಕಡಲತಳದಲ್ಲಿ ವಾಸಿಸುವ ಕೆಲವು ಮೀನುಗಳ ಮತ್ತು ಸಾಕು ಕುದುರೆಗಳ ಹೊಳಪು ಬಣ್ಣಗಳು ಇದಕ್ಕೆ ಉದಾಹರಣೆಗಳು.

ಬಣ್ಣವನ್ನು ಪಡೆದಿರಬೇಕಾಗಿದ್ದ ಪ್ರಾಣಿಯ ರೋಮ ಅಥವಾ ಗರಿಗಳಲ್ಲಿ ಇಲ್ಲವೆ ಚರ್ಮ ಮತ್ತು ಕಣ್ಣು ಪಾಪೆಗಳಲ್ಲಿ ಬಣ್ಣ ಇಲ್ಲದಿದ್ದರೆ ಅಂಥ ಸ್ಥಿತಿ ವರ್ಣಹೀನತೆ (ಅಲ್ಬೈನಿಸಮ್) ಎನಿಸಿಕೊಳ್ಳುತ್ತದೆ. ಇಂಥ ಸಂದರ್ಭಗಳಲ್ಲಿ ರೋಮ ಮತ್ತು ಗರಿಗಳು ಬಿಳಿಯ ಬಣ್ಣದವಾಗಿರುತ್ತವೆ. ವರ್ಣಕ ಕಣಗಳನ್ನು ಒಳಗೊಂಡಿರುಬೇಕಾದ ಸೂಕ್ಷ್ಮಸಂದುಗಳಲ್ಲಿ ವಾಯು ತುಂಬಿದ್ದು ಅದು ಪೂರ್ಣ ಬೆಳಕನ್ನು ಪ್ರತಿಫಲಿಸುವುದರಿಂದ ಅವು ಬೆಳ್ಳಗಿರುತ್ತವೆ. ಉದಾಹರಣೆಗೆ ಬಿಳಿಯ ಇಲಿ, ಮೊಲ ಮುಂತಾದವು. ಇವು ಮೆಲಾನಿನ್ ವರ್ಣಕವಿಲ್ಲದ ಸಂಪೂರ್ಣ ಬಿಳಿ ಪ್ರಾಣಿಗಳು, ಕಣ್ಣುಪಾಪೆಯಲ್ಲಿ ವರ್ಣಕವಿಲ್ಲದಿರುವುದರಿಂದ ಕಣ್ಣುಗುಡ್ಡೆಯ ಹಿಂಬದಿಯಲ್ಲಿರುವ ರಕ್ತನಾಳಗಳು ದೃಷ್ಟಿಗೋಚರವಾಗಿ ಇಂಥ ಪ್ರಾಣಿಗಳ ಕಣ್ಣುಗಳು ಕಡುಕೆಂಪಾಗಿ ಕಾಣಿಸುತ್ತವೆ. ಪಕ್ಷಿಗಳಲ್ಲಿ (ಬಿಳಿಯ ಕಾಗೆ), ಜಿಂಕೆ, ಆನೆ, ಹುಲಿ ಮತ್ತು ಮಾನವರಲ್ಲಿಯೂ ಈ ತೆರನ ವರ್ಣಹೀನತೆ ಕಂಡುಬರುತ್ತದೆ. ವಾಸ್ತವವಾಗಿ ಇಂಥ ಪ್ರಾಣಿಗಳು ಸುಲಭವಾಗಿ ಶತ್ರುಗಳ ದೃಷ್ಟಿಗೆ ಬೀಳುವುದರಿಂದ ಇವು ಸಂದಣಿಯಿಂದ ಕಣ್ಮರೆಯಾಗುತ್ತವೆ.
ಮೆಲನಿಸಮ್ ಎಂಬುದು ವರ್ಣಹೀನತೆಯ ತದ್ವಿರುದ್ಧಸ್ಥಿತಿ. ಚರ್ಮದಲ್ಲಿ ವರ್ಣಕ ನಿರುಪಸ್ಥಿತವಾಗಿರುವ ಬದಲು ಕಪ್ಪು ಮೆಲಾನಿನ್ ವರ್ಣಕ ಇರುತ್ತದೆ.

ಅಮೂಲ್ಯ ಬಣ್ಣಗಳು : ಬದುಕಿನ ಹೋರಾಟದಲ್ಲಿ ಆಯ್ಕೆಯ ದೃಷ್ಟಿಯಿಂದ ಅಮೂಲ್ಯವಾದ ಕೆಲವು ಬಣ್ಣಗಳಿವೆ. ಉಪಯುಕ್ತತೆಯ ಆಧಾರದ ಮೇಲೆ ಇದನ್ನು ಕೆಳಕಂಡಂತೆ ವರ್ಗೀಕರಿಸಲಾಗಿದೆ.

1 ಅನುಕಂಪನ ವರ್ಣ ಅಥವಾ ನಿಗೂಢ ಬಣ್ಣ (ಗುಪ್ತ ಬಣ್ಣಗಳು : ) ಇದರಲ್ಲಿ ಎರಡು ವಿಧ : (ಚಿ) ಬೇಟೆಗೆ ಈಡಾಗುವ ಪ್ರಾಣಿಯ ರಕ್ಷಕ ಬಣ್ಣ, (b) ಬೇಟೆಯಾಡುವ ಪ್ರಾಣಿಯ ಕೆಣಕುಬಣ್ಣ.
2 ಎಚ್ಚರಿಕೆಯ ಬಣ್ಣ
3 ಜಾತಿಯ ಪ್ರಮಾಣಬೂತ ಬಣ್ಣ
4 ಅನುಕರಣ ವರ್ಣ
5 ಸಂಕೇತಸೂಚಕ ಮತ್ತು ಗುರುತಿನ ಬಣ್ಣಗಳು
6 ಕಂಗೆಡಿಸುವ ಬಣ್ಣ
7 ಲಿಂಗ ವರ್ಣಗಳು.

1 ಅನುಕಂಪನ ವರ್ಣಗಳು : ತಮ್ಮ ಸುತ್ತಲ ಪರಿಸರದ ಹಿನ್ನೆಲೆಯೊಂದಿಗೆ ಪೂರ್ಣವಾಗಿ ಐಕ್ಯವಾಗುವ ವರ್ಣವೈವಿಧ್ಯವನ್ನು ಇವು ಒಳಗೊಂಡಿವೆ. ಶತ್ರುಗಳಿಂದ ತಪ್ಪಿಸಿಕೊಳ್ಳಲು ಇವು ಸಹಾಯಕ, ಇವನ್ನು ರಕ್ಷಕ ತೊಡುಗೆ ಎಂದು ಕರೆಯಬಹುದು. ಇದೇ ರೀತಿ ಪರಿಸರದ ಹಿನ್ನೆಲೆಯಲ್ಲಿ ಅಡಗಿ ಕಾದಿದ್ದು ಆಹಾರ ಜೀವಿಯನ್ನು ಹಿಡಿಯಲು ಕೂಡ ಇದು ನೆರವಾಗಬಹುದು. ಇದೇ ಕೆಣಕು ಬಣ್ಣ. ಧ್ರುವ ಪ್ರದೇಶದಲ್ಲಿ ವಾಸಿಸುವ ಮೊಲ ಮತ್ತು ನರಿಗಳು ಇದಕ್ಕೆ ಉತ್ತಮ ಉದಾಹರಣೆಗಳು. ಇಲ್ಲಿ ಎರಡೂ ಸಂದರ್ಭಗಳಲ್ಲಿ ಬಿಳಿಯಬಣ್ಣದ ಕಾರ್ಯಪ್ರಾಣಿಗೆ ರಕ್ಷಣೆಯೊದಗಿಸುವುದು. ಅಲ್ಲದೆ ನರಿಯಲ್ಲಿ ಕೆಣಕು ವರ್ಣವೂ ಹೌದು. ಕಪ್ಪೆಯ ಬೆನ್ನುಭಾಗದ ದಟ್ಟ ಹಸುರು ಮತ್ತು ಹೊಟ್ಟೆಯ ಭಾಗದ ತೆಳು ಹಳದಿ ಬಣ್ಣದ ಚರ್ಮ ಪ್ರಾಣಿಯನ್ನು ಶತ್ರುಗಳಿಂದ ರಕ್ಷಿಸುತ್ತದೆ.

ಆಫ್ರಿಕದಲ್ಲಿ ಕಾಣಸಿಗುವ ಸೆಲಿಬಸ್ ಆಕ್ಸಿಡೆಂಟ್ಯಾಲಿಸ್ ಎಂಬ ಕೋತಿಯ ಮೈ ಕಪ್ಪು ಬಣ್ಣದ್ದು. ಅಲ್ಲಲ್ಲಿ ಬಿಳಿಯ ಪಟ್ಟೆಗಳಿವೆ. ಈ ಕೋತಿ ವಾಸಿಸುವ ಪ್ರದೇಶದಲ್ಲಿ ಬೆಳೆಯುವ ಮರದ ಕಾಂಡಗಳು ಮತ್ತು ಕವಲುಗಳು ಕಪ್ಪಾಗಿದ್ದು ಅವುಗಳ ಮೇಲೆ ಕಂದುಬಣ್ಣದ ಕಲ್ಲುಹೂಗಳಿರುತ್ತವೆ. ಈ ಹಿನ್ನೆಲೆಯಲ್ಲಿ ಕೋತಿಯ ಕಪ್ಪು ಬಣ್ಣ ಕಾಂಡವನ್ನೂ, ಬಿಳಿಯ ಪಟ್ಟೆಗಳು ಕಲ್ಲು ಹೂಗಳನ್ನೂ ಅನುಕರಿಸುವುದರಿಂದ ಇದು ಒಂದು ರೀತಿಯಲ್ಲಿ ರಕ್ಷಕ ವರ್ಣ.

ಇತರ ಪ್ರಭೇದಗಳು ಎರಡು ವಿಧದಲ್ಲಿ ಬಣ್ಣದ ವ್ಯತ್ಯಾಸವನ್ನು ತೋರಬಹುದು : (ಚಿ) ಸ್ಥಳೀಯ ಬಣ್ಣ ಅಥವಾ (b) ಶ್ರಾಯಕ ಬಣ್ಣ.

(ಚಿ) ಸ್ಥಳೀಯ ಬಣ್ಣ : ಒಂದೇ ಪ್ರಾಣಿ ಪ್ರಭೇದದಲ್ಲಿ ಸ್ಥಳವನ್ನು ಅನುಸರಿಸಿ ಕಾಣುವ ಬಣ್ಣದ ವ್ಯತ್ಯಾಸಕ್ಕೆ ಈ ಹೆಸರಿದೆ. ಉದಾಹರಣೆಗೆ ಒಂದೇ ಪ್ರಭೇದಕ್ಕೆ ಸೇರಿದ ಮಿಡತೆಗಳು ವಿವಿಧ ಸ್ಥಳಗಳಲ್ಲಿ ತೋರುವ ಬಣ್ಣದ ವ್ಯತ್ಯಾಸಗಳು.

ಸ್ಪಿಂಕ್ಸ್ ಲಿಂಗುಸ್ಟ್ರಿ ಎಂಬ ಗಿಡುಗ ಪತಂಗ (ಹಾಕ್ ಮಾತ್) ಮರದ ಮೇಲೆ ಇದ್ದಾಗ ಹಸುರು ಬಣ್ಣವನ್ನೂ ನೆಲದ ಮೇಲಿದ್ದಾಗ ಬೂದು ಬಣ್ಣವನ್ನೂ ಪ್ರದರ್ಶಿಸುತ್ತದೆ. ಇದೇ ರೀತಿ ಸನ್ನಿವೇಶಕ್ಕೆ ತಕ್ಕಂತೆ ಲಾರ್ವ ಅವಸ್ಥೆಯಲ್ಲಿ, ಕೋಶಾವಸ್ಥೆಯಲ್ಲಿ ಮತ್ತು ಪ್ರಬುದ್ಧಾವಸ್ಥೆಯಲ್ಲಿ ಬೇರೆ ಬೇರೆ ಬಣ್ಣಗಳನ್ನು ತೋರುವ ನಿದರ್ಶನಗಳುಂಟು. ಹಾವುಮೀನುಗಳು, ಅನೇಕ ತೆರನ ಮೃದ್ವಂಗಿಗಳು ಮತ್ತು ಕಠಿಣಚರ್ಮಿಗಳು ಎಳೆಯ ಅವಸ್ಥೆಯಲ್ಲಿ ವರ್ಣರಹಿತವಾಗಿ ಪಾರಕವಾಗಿ, ಪ್ರಬುದ್ಧಾವಸ್ಥೆಯಲ್ಲಿ ಅವುಗಳ ಸುತ್ತ ಬೆಳೆಯುವ ಗಿಡ ಅಥವಾ ಮರಳಿನ ಬಣ್ಣವನ್ನು ತೋರುತ್ತವೆ. ಅತ್ಯುತ್ತಮ ಉದಾಹರಣೆ ಎಂದರೆ ಆಪ್ಲೀಸಿಯಾ ಪಂಕ್ಟೇಟ ಎಂಬ ಕಡಲ ಮೊಲ. ಇಲ್ಲಿ ವಯಸ್ಸಿಗೆ ಅನುಗುಣವಾಗಿ ಬಣ್ಣ ಗುಲಾಬಿ ಕೆಂಪಿನಿಂದ ಪಾಚಿ ಹಸುರಿನ ವರೆಗೆ ಬದಲಾಗುತ್ತದಲ್ಲದೆ ಪ್ರಾಣಿ ಆಳನೀರಿನಿಂದ ಉತ್ತಲ ನೀರಿಗೆ ವಲಸೆ ಬಂದಂತೆ ಅಲ್ಲಲ್ಲಿಯ ಹಿನ್ನೆಲೆಗೆ ಅನುಸಾರವಾಗಿ ಬದಲಾಗುತ್ತದೆ.

(b) ಶ್ರಾಯಕ ಬಣ್ಣ : ಇಲ್ಲಿ ದೇಹದ ಬಣ್ಣ ಚಳಿಗಾಲದಲ್ಲಿ ಒಂದು ತೆರನಾಗಿದ್ದರೆ ಬೇಸಿಗೆಯಲ್ಲಿ ಇನ್ನೊಂದು ತೆರನಾಗಿರುತ್ತದೆ. ಅನೇಕ ಪಕ್ಷಿಗಳು ಮತ್ತು ಸ್ತನಿಗಳು ಈ ಬಗೆಯ ಶ್ರಾಯಕ ಬದಲಾವಣೆಯನ್ನು ತೋರುತ್ತವೆ. ಉದಾಹರಣೆಗೆ ಉತ್ತರ ಧ್ರುವದ ನರಿ ಮತ್ತು ಬೆಟ್ಟದ ಮೊಲಗಳು, ಉತ್ತರ ಅಮೆರಿಕದ ಪ್ರೇರೀಗಳಲ್ಲಿ ವಾಸಿಸುವ ಲೀಪಸ್ ಕ್ಯಾಂಪೆಸ್ಟ್ರಿಸ್ ಮತ್ತು ಲೀಪಸ್ ಅಮೆರಿಕಾನಸ್ ಮೊಲಗಳು ಚಳಿಗಾಲದಲ್ಲಿ ಬಿಳಿಯ ಬಣ್ಣ ತಾಳುತ್ತವೆ. ಯೂರೊಪಿನ ಡಾಮ ಜಿಂಕೆ ಮತ್ತು ಜಪಾನಿನ ಸೀಕ ನಿಪ್ಪಾನ್ ಜಿಂಕೆಗಳು ಬೇಸಿಗೆಯಲ್ಲಿ ಬಿಳಿಯ ಚುಕ್ಕೆಗಳ ಬೆಡಗನ್ನು ತೋರುವುವಾದರೆ ಚಳಿಗಾಲದಲ್ಲಿ ಚುಕ್ಕೆಗಳು ಕಣ್ಮರೆಯಾಗಿ ದೇಹ ಒಟ್ಟಾಗಿ ಕಂದು ಅಥವಾ ಬೂದು ಬಣ್ಣ ತಾಳುತ್ತದೆ. ಕೆಲವು ಪ್ರಾಣಿಗಳಲ್ಲಿ ಶ್ರಾಯಕ ಬದಲಾವಣೆಯ ಮಟ್ಟ ಅಕ್ಷಾಂಶ ಮತ್ತು ಹವೆಯನ್ನು ಅನುಸರಿಸಿದೆ.

2 ಎಚ್ಚರಿಕೆಯ ಬಣ್ಣ : ಶತ್ರುಗಳ ಆಕ್ರಮಣದ ವಿರುದ್ಧ ಸಮರ್ಥ ರೀತಿಯಲ್ಲಿ ರಕ್ಷಿಸಿಕೊಳ್ಳುವುದಕ್ಕೆ ಇದು ಸಂಬಂಧಿಸಿದೆ. ಕೀಟಗಳು, ಉಭಯಚರಿಗಳು ಮತ್ತು ಸರೀಸೃಪಗಳಲ್ಲಿ ಇದನ್ನು ವಿಶೇಷವಾಗಿ ಕಾಣಬಹುದು. ಎಚ್ಚರಿಕೆಯ ಬಣ್ಣ ಸಾಮಾನ್ಯವಾಗಿ ಕೆಂಪು ಅಥವಾ ಹಳದಿಯಾಗಿರುತ್ತದೆ. ಉದಾಹರಣೆ: ಹವಳದ ಹಾವು, ಹುಲಿ ಸಾಲಮ್ಯಾಂಡರ್, ಚಿಟ್ಟೆಗಳು, ಕಂಬಳಿ ಹುಳು ಮುಂತಾದ ವಿಷಜಂತುಗಳು ಅಥವಾ ಖಾದ್ಯಯೋಗ್ಯವಲ್ಲದ ಪ್ರಾಣಿಗಳು. ಇವುಗಳ ಪ್ರಕಾಶ ಮಾನವಾದ ವರ್ಣವೈವಿಧ್ಯದಿಂದಾಗಿ ಶತ್ರುಗಳು ಇವನ್ನು ಆಕ್ರಮಿಸುವುದಿಲ್ಲ. ಅಲ್ಲದೆ ಇಂಥ ಪ್ರಾಣಿಗಳು ನಿರುಪದ್ರವಿಪ್ರಾಣಿಗಳು. ಕೆಲವು ಪ್ರಾಣಿಗಳಿಗೆ ಹೊಟ್ಟೆಯ ಮೇಲೆ ಗಮನಾರ್ಹವಾದ ಬಣ್ಣವಿದ್ದು ಶತ್ರುಗಳು ಆಕ್ರಮಿಸಿದಾಗ ಅಂಗಾತನಾಗಿ ಹೊಟ್ಟೆ ಭಾಗವನ್ನು ಪ್ರದರ್ಶಿಸುವ ಅಭ್ಯಾಸ ಇರುತ್ತದೆ. ಉದಾಹರಣೆಗೆ ಹಂದಿಮೂತಿ ಹಾವು (ಹೆಟರೊಡಾನ್ ಪ್ಲಾಟಿರೈನಿಸ್) ಶತ್ರು ಹತ್ತಿರಕ್ಕೆ ಬಂದಾಗ ಬಾಯನ್ನು ತೆಗೆದು ಶಬ್ದಮಾಡುತ್ತದೆ. ಇದರಿಂದ ಶತ್ರು ಹೆದರಿ ಓಡಿಹೋಗದಿದ್ದರೆ ಆಗ ಅಂಗಾತ ಮಲಗಿ ಸತ್ತಂತೆ ನಿಶ್ವಲವಾಗಿ ಬಿದ್ದು ತನ್ನ ಹೊಟ್ಟೆಯ ಮೇಲಿನ ಕಪ್ಪು ಬಣ್ಣವನ್ನು ಪ್ರದರ್ಶಿಸುತ್ತದೆ. ಕೆಲವು ರೀತಿಯ ನೆಲಗಪ್ಪೆಗಳು ಮತ್ತು ಭಾರತದ ಒಂದು ಜೇಡ ಇದೇ ರೀತಿ ಹೊಟ್ಟೆಯನ್ನು ಪ್ರದರ್ಶಿಸಿವ ಪ್ರವೃತ್ತಿಯನ್ನು ತೋರುತ್ತವೆ. ಕೆಲವು ಕೀಟಗಳು, ನೆಲಗಪ್ಪೆಗಳು ಮತ್ತು ಹಲ್ಲಿಗಳಂಥ ಪ್ರಾಣಿಗಳು ಶತ್ರುವಿನ ಎದುರಿಗೆ ಚರ್ಮದನೆರಿಗೆಗಗಳನ್ನು ನೆಟ್ಟಗೆ ಮಾಡಿ ಎಚ್ಚರಿಕೆಯ ಬಣ್ಣಗಳನ್ನು ಪ್ರದರ್ಶಿಸುತ್ತವೆ. ಕೆಲವು ಮೀನುಗಳು ಈಜು ರೆಕ್ಕೆಗಳನ್ನು ಅಗಲಿಸಿ ಹೆದರಿಸುವ ಭಂಗಿಯನ್ನು ತಾಳಿ ತಮ್ಮನ್ನು ತಿನ್ನಲು ಬರುವ ಮಾಂಸಾಹಾರಿ ಪ್ರಾಣಿಗೆ ತನ್ನ ಈಜುರೆಕ್ಕೆಯಲ್ಲಿರುವ ವಿಷದ ಮುಳ್ಳುಗಳ ಬಗೆಗೆ ಎಚ್ಚರಿಕೆ ನೀಡುತ್ತವೆ. ಎಚ್ಚರಿಕೆಯ ಬಣ್ಣ ಸಾಮಾನ್ಯವಾಗಿ ಮರಳು ಕಾಡಿನಲ್ಲಿ ವಾಸಿಸುವ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಇವು ಹೆಚ್ಚು ಆಪಾಯಕಾರಿಯಾದ ಪ್ರಾಣಿಗಳ ಬಣ್ಣದ ಅನುಕರಣೆಯಾಗಿರಬಹುದು ಇಲ್ಲವೆ ಇಂಥ ಪ್ರಾಣಿಗಳು ಸ್ವತಃ ವಿಷಜಂತುಗಳಾಗಿರಬಹುದು.

3 ಜಾತಿಯ ಪ್ರಮಾಣಭೂತ ಬಣ್ಣ : ವಿವಿಧ ಪರಿಸ್ಥಿತಿಗಳಲ್ಲಿ ಅಥವಾ ಪ್ರದೇಶಗಳಲ್ಲಿ ವಾಸಿಸುವ ಪ್ರಾಣಿಗಳು ಒಂದೇ ರೀತಿಯ ವಸತಿ ಬಣ್ಣವನ್ನು ಪ್ರದರ್ಶಿಸುವುವು. ಇದರಿಂದಾಗಿ ಇವುಗಳ ಆಕಾರ ಮತ್ತು ಬಣ್ಣದಿಂದ ಇವನ್ನು ಗುರುತಿಸುವುದು ಕಷ್ಟವಾಗುತ್ತದೆ. ಅನೇಕ ಕಡಲು ಹಕ್ಕಿಗಳ ಬೆನ್ನುಭಾಗ ತೆಳುನೀಲಿ ಬಣ್ಣದ್ದೂ ಉದರಭಾಗ ಬಿಳಿಬಣ್ಣದ್ದೂ ಆಗಿರುತ್ತದೆ. ಇದರಿಂದಾಗಿ ಮೇಲಿನಿಂದ ನೋಡಿದಾಗ ನೀಲಿಯ ಬಣ್ಣ ಕಡಲಿನ ಬಣ್ಣದೊಂದಿಗೆ ಮಿಳಿತವಾಗುತ್ತದೆ ಮತ್ತು ಕೆಳಗಿನಿಂದ ನೋಡಿದಾಗ ಬಿಳಿಯ ಬಣ್ಣದೊಂದಿಗೆ ಮಿಳಿತವಾಗುತ್ತದೆ. ಮತ್ತು ಕೆಳಗಿನಿಂದ ನೋಡಿದಾಗ ಬಿಳಿಯ ಬಣ್ಣ ಆಕಾಶದೊಂದಿಗೆ ಮಿಳಿತವಾಗುತ್ತದೆ. ಕಡಲಿನಲ್ಲಿ ತೇಲುಜೀವಿಯಾಗಿ ವಾಸಿಸುವ ಗ್ಲಾಕಸ್ ಎಂಬ ಶಂಭೂಕ ಹೊಟ್ಟೆಯನ್ನು ಮೇಲೆ ಮಾಡಿಕೊಂಡು ತೇಲುತ್ತದೆ. ಇಲ್ಲಿ ಹೊಟ್ಟೆಯ ಭಾಗ ನೀಲಿಯಾಗಿಯೂ ಮತ್ತು ಬೆನ್ನಿನ ಭಾಗ ಬಿಳಿಯಾಗಿಯೂ ಇದೆ. ದೇಹದ ಅಂಗರಚನೆಯ ದೃಷ್ಟಿಯಿಂದ ಈ ಬಣ್ಣಗಳು ತಿರುಗುಮುರುಗಾದಂತೆ ಕಂಡರೂ ವಸತಿ ವರ್ತನೆಯ ದೃಷ್ಟಿಯಿಂದ ಸ್ವಾಭಾವಿಕವಾಗಿವೆ. ಉತ್ತರ ಧ್ರುವ ಪ್ರದೇಶದಲ್ಲಿ ವಾಸಿಸುವ ಪ್ರಾಣಿಗಳು ಸಾಮಾನ್ಯವಾಗಿ ಹಿನ್ನಲೆಯನ್ನು ಹೋಲುವ ಬಿಳಿಯ ಬಣ್ಣವನ್ನು ತೋರುತ್ತದೆ. ಇದೇ ರೀತಿ ಕಲ್ಲು ಮತ್ತು ಕಡಲ ಕಳೆಗಳ ನಡುವೆ ವಾಸಿಸುವ ಏಡಿಗಳು, ನಕ್ಷತ್ರ ಮೀನು, ಕಡಲಪೋರ, ಶಂಭೂಕ, ಕಡಲತಾವರೆ, ಕಡಲಹುಳುಗಳೇ ಮುಂತಾದವು ಹಿನ್ನೆಲೆಗೆ ಉಚಿತವಾದ ಬಣ್ಣ ತೊಡುಗೆಯನ್ನು ತೋರುತ್ತದೆ. ಡೋರಿಸ್ ಎಂಬ ಶಂಭೂಕ ತೆಳುಹಳದಿಯ ಬಣ್ಣದಾಗಿದ್ದು ದೂರಕ್ಕೆ ಹಳದಿಬಣ್ಣದ ಸ್ಪಂಜಿನಂತೆ ಕಾಣುತ್ತದೆ.

4 ಅನುಕರಣ ಬಣ್ಣ : ಅನೇಕ ತೆರನ ಚಿಟ್ಟೆಗಳು ಮತ್ತು ಪತಂಗಗಳು ತಮ್ಮ ಜೀವಮಾನ ಪರ್ಯಂತ ಮರೆಮಾಚುವ ವರ್ಣವೈವಿಧ್ಯವನ್ನು ತೋರತ್ತವೆ. ಉದಾಹರಣೆಗೆ ಬ್ರೆಜಿಲ್ ವಾಸಿಯಾದ ಜರಿರೆಕ್ಕೆ ಪತಂಗ ಕ್ಲಿಯೋರ ಲೈಕಿನೇರಿಯ. ಕಲ್ಲುಹೂಗಳ ನಡುವೆ ಬದುಕುವ ಇದರ ಲಾರ್ವ, ಕೋಶಾವಸ್ಥೆ ಮತ್ತು ಪ್ರಬುದ್ಧ ಪತಂಗಗಳೆಲ್ಲವೂ ಕರಾರುವಾಕ್ಕಾಗಿ ತಮ್ಮ ಹಿನ್ನೆಲೆಯೊಂದಿಗೆ ಮಿಳಿತವಾಗುತ್ತವೆ ಶ್ರೀಲಂಕಾದಲ್ಲಿ ದೊರೆಯುವ ಕಾಲಿಮ ಎಂಬ ಚಿಟ್ಟೆ ಮತ್ತು ಭಾರತವಾಸಿಯಾದ ಸತ್ತ ಎಲೆಯ ಚಿಟ್ಟೆ ಮರೆಮಾಚುವಿಕೆಗೆ ಉತ್ಕøಷ್ಟ ಉದಾಹರಣೆಗಳು, ತಮ್ಮ ರೆಕ್ಕೆಗಳನ್ನು ಮಡಿಚಿಕೊಂಡಾಗ ಈ ಚಿಟ್ಟೆಗಳು ಆಕಾರದಲ್ಲೂ ಬಣ್ಣದಲ್ಲೂ ಒಣಗಿದ ಎಲೆಯನ್ನೂ ಅದರ ತೊಟ್ಟನ್ನೂ ಹೋಲುತ್ತವೆ. ಕೋಸಿನ ಬಿಳಿ ಚಿಟ್ಟೆಯ ಕೋಶಾವಸ್ಥೆಯ ಬಣ್ಣ ಅದು ಅಂಟಿಕೊಂಡಿರುವ ತೊಗಟೆ ಅಥವಾ ಗೋಡೆ ಅಥವಾ ಬೇಲಿಯ ಬಣ್ಣಕ್ಕೆ ಅನುಗುಣವಾಗಿರುತ್ತದೆ

5 ಸಂಕೇತ ಸೂಚಕ ಮತ್ತು ಗುರುತಿನ ಬಣ್ಣಗಳು : ಗುಂಪಿನಲ್ಲಿ ವಾಸಿಸುವ ಪ್ರಾಣಿಗಳು ಪರಸ್ಪರ ಸುದ್ದಿವಿನಿಮಯ ಮಾಡಿಕೊಳ್ಳಲು ಕೆಲವು ರೀತಿಯ ಬಣ್ಣದ ಸಂಕೇತಗಳನ್ನು ಬಳಸಿಕೊಳ್ಳುತ್ತವೆ. ಉದಾಹರಣೆಗೆ ಮೇಯುತ್ತಿರುವ ಜಿಂಕೆಗಳ ಮಂದೆಯೊಂದರಲ್ಲಿ ಯಾವುದಾದರೂ ಒಂದು ಪ್ರಾಣಿಗೆ ಅಪಾಯದ ಸುಳಿವು ಸಿಕ್ಕಿದರೆ ಅದು ತನ್ನಬಾಲವನ್ನು ಮೇಲೆತ್ತಿ ತಳಭಾಗದಲ್ಲಿರುವ ಬಣ್ಣವನ್ನು ಪ್ರದರ್ಶಿಸಿ ಮಂದೆಯ ಇತರ ಪ್ರಾಣಿಗಳಿಗೆ ಅಪಾಯದ ಮುನ್ಸೂಚನೆಯನ್ನು ಕೊಡುತ್ತದೆ. ಇದೇ ರೀತಿ ಕೆಲವು ಪಕ್ಷಿಗಳ ರೆಕ್ಕೆಯ ತಳಭಾಗದಲ್ಲಿ ಮತ್ತು ಬಾಲದ ಗರಿಗಳ ಮೇಲೆ ಹೊಳೆಯುವ ಬಣ್ಣದ ಪಟ್ಟೆಗಳಿರುತ್ತವೆ. ಅಪಾಯ ಪರಿಸ್ಥಿತಿಗಳಲ್ಲಿ ಗಾಬರಿಯಿಂದ ಇವು ಮೇಲೆ ಹಾರಿದಾಗ ಈ ಬಣ್ಣದ ಪಟ್ಟೆಗಳು ಇತರ ಪಕ್ಷಿಗಳಿಗೆ ಕಾಣಿಸಿಕೊಂಡು ಅಪಾಯದ ಮುನ್ಸೂಚನೆ ಸಿಗುತ್ತದೆ. ಕೆಲವೊಮ್ಮೆ ಈ ಬಣ್ಣಗಳು ಒಂದೇ ಪ್ರಭೇದಕ್ಕೆ ಸೇರಿದ ಇತರ ಪ್ರಾಣಿಗಳು ಸಂಕೇತಗಳನ್ನು ಅರಿತುಕೊಳ್ಳುವಂತೆಮಾಡುವ ಗುರುತು ಬಣ್ಣವೂ ಆಗಿರಬಹುದು. ಸಾಲ್ವೆಲಿನಸ್ ಫಾಂಟಿನಾಲಿಸ್ ಎಂಬ ಟ್ರೌಟ್ ಮೀನಿನಲ್ಲಿ ಈ ತೆರನ ಗುರುತು ಬಣ್ಣವನ್ನು ಕಾಣಬಹುದು. ಮೀನಿನ ಎರಡೂ ಪಕ್ಕದಲ್ಲಿ ಕಿತ್ತಲೆ ಮತ್ತು ಕೆಂಪು ಬಣ್ಣದ ಚುಕ್ಕೆಗಳಿದ್ದು ಇದರಿಂದ ಮೀನು ವರ್ಣರಂಜಕವಾಗಿದೆ. ನೆರಳಿನ ಪ್ರದೇಶಗಳಲ್ಲಿ ವಾಸಿಸುವ ಇದು ಮೇಲಿನಿಂದ ನೋಡುವ ಶತ್ರುವಿಗೆ ಅಗೋಚರವಾಗಿದ್ದು ಪಕ್ಕದಿಂದ ನೋಡುವ ತನ್ನ ಪ್ರಭೇದದ ಇತರ ಮೀನುಗಳಿಗೆ ಗೋಚರಿಸುತ್ತದೆ. ಈ ರೀತಿಯ ಗುರುತು ಬಣ್ಣಗಳನ್ನು ಚಿಟ್ಟೆ ಮತ್ತು ಪತಂಗಗಳಲ್ಲಿಯೂ ಕಾಣಬಹುದು.

6 ಕಂಗೆಡಿಸುವ ಬಣ್ಣ : ಕೆಲವು ಬಗೆಯ ಚಿಟ್ಟೆ ಹಾಗೂ ಪತಂಗಗಳಲ್ಲಿ ಈ ತೆರನ ಬಣ್ಣಗಳನ್ನು ಕಾಣಬಹುದು. ಇವು ಹಾರುತ್ತಿರುವಾಗ ಈ ಬಣ್ಣಗಳು ಗಮನ ಸೆಳೆಯುವಂತಿದ್ದು ಹಕ್ಕಿಯಂಥ ಶತ್ರು ಇವನ್ನು ಸುಲಭವಾಗಿ ಅನುಸರಿಸಬಹುದು. ಆದರೆ ಹಠಾತ್ತನೆ ಪತಂಗಗಳು ಯಾವುದಾದರೂ ವಸ್ತುವಿನ ಮೇಲೆ ಕುಳಿತು ತಮ್ಮ ಗಮನ ಸೆಳೆಯುವ ಬಣ್ಣವನ್ನು ಮರೆಮಾಚಿದಾಗ ಶತ್ರುವಿನ ಕಣ್ಣಿಗೆ ಇವು ಕಾಣದಾಗುತ್ತದೆ. ಇದರಿಂದ ಶತ್ರು ತಬ್ಬಿಬ್ಬಾಗುವುದು.

7 ಲಿಂಗ ವರ್ಣಗಳು : ಲಿಂಗ ವರ್ಣ ಲೈಗಿಂಕ ಆಯ್ಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಅನೇಕ ಪ್ರಾಣಿಗಳಲ್ಲಿ ವಿಶೇಷವಾಗಿ ಪಕ್ಷಿಗಳಲ್ಲಿ ಹೆಣ್ಣುಗಳಿಗಿಂತಲೂ ಹೆಚ್ಚಾಗಿ ಗಂಡು ಹೊಳಪು ಬಣ್ಣದ್ದು, ತನ್ನ ಹೊಳಪು ಬಣ್ಣದ ಗರಿಗಳನ್ನು ಪ್ರದರ್ಶಿಸಿ ಹೆಣ್ಣುಹಕ್ಕಿಯನ್ನು ಒಲಿಸಿಕೊಳ್ಳುತ್ತದೆ. ಅಮೆರಿಕದ ಕಾರ್ಡಿನಲ್ ಬಾಸ್ ಹಕ್ಕಿಯಲ್ಲಿ ರಕ್ತವರ್ಣದ ನಿಷೇಚನ ಗರಿಗಳು ಬೆಳೆಯುತ್ತವೆ. ಗಂಡುಹಕ್ಕಿಯನ್ನು ಹೆಣ್ಣುಹಕ್ಕಿ ಗುರುತಿಸಲು ನೆರವಾಗುವುದೇ ಅಲ್ಲದೆ ಪ್ರಣಯಾಚರಣೆಯಲ್ಲಿ ಈ ಬಣ್ಣ ನೆರವಾಗುತ್ತದೆ. ಈ ರೀತಿಯ ವರ್ಣರಂಜಿತ ಗರಿಗಳನ್ನು ಹುಂಜ, ಗಂಡು ಪಾರಿವಾಳ, ಗಂಡು ನವಿಲುಗಳಲ್ಲಿ ಕಾಣಬಹುದು. ಗಂಡುಗಳಿಗೆ ಮಾತ್ರ ಈ ಹೊಳಪು ಬಣ್ಣಗಳಿರಬೇಕು ಎನ್ನುವುದಕ್ಕೆ ಕಾರಣಗಳು ಸ್ಪಷ್ಟವಿಲ್ಲ. ಬಹುಶಃ ಮೊಟ್ಟೆಗಳ ಮೇಲೆ ಕಾವು ಕೂರುವ ಮರಿಗಳನ್ನು ಪೋಷಿಸುವ ಕೆಲಸ ಹೆಣ್ಣು ಹಕ್ಕಿಯದಾದ್ದರಿಂದ ಅಂಥ ಸಮಯಗಳಲ್ಲಿ ಶತ್ರುಗಳಿಂದ ರಕ್ಷಿಸುವ ದೃಷ್ಟಿಯಿಂದ ಈ ರೀತಿಯ ಮಬ್ಬು ಬಣ್ಣಗಳು ನೆರವಾಗಬಹುದು. ಉಳಿದ ಪ್ರಾಣಿಗಳಲ್ಲೂ ಈ ವಿದ್ಯಮಾನ ಉಂಟು. ಅಷ್ಟಪಾದಿಗಳು ತಮ್ಮ ಹೊಳಪು ಬಣ್ಣಗಳನ್ನು ಪ್ರಣಯ ಮೇಳಕ್ಕೆ ಬಳಸಿಕೊಳ್ಳುತ್ತವೆ. ಅನೇಕ ಗಂಡು ಮೀನುಗಳು, ಗಂಡು ಸಾಲಮ್ಯಾಂಡರುಗಳು ಮತ್ತು ಗಂಡು ಹಲ್ಲಿಗಳಲ್ಲಿ ಹೊಳಪು ಬಣ್ಣಗಳುಂಟು. ಸಂತಾನವೃದ್ಧಿ ಶ್ರಾಯದಲ್ಲಿ ಗಂಡು ಓತಿಯ ಕುತ್ತಿಗೆಯ ಸುತ್ತಲ ಹುರುಪೆಗಳು ರಕ್ತವರ್ಣವನ್ನು ತಾಳುತ್ತವೆ. ಅನೇಕ ಆದಿಮ ಜೀವಿಗಳಲ್ಲಿ (ಸ್ಪಂಜುಗಳು, ಕಡಲತಾರೆಗಳು, ಅಂಬಲಿಮೀನುಗಳು, ಪ್ರಣಯಾಚರಣೆ ಇಲ್ಲದಿದ್ದರೂ ಹೊಳಪು ಬಣ್ಣಗಳನ್ನು ಕಾಣಬಹುದು. ಇಂಥ ಬಣ್ಣ ಬಹುತೇಕವಾಗಿ ಶಾರೀರಕ್ರಿಯೆಯ ಉಪೋತ್ಪನ್ನವಾಗಿ ಉದ್ಭವಿಸುತ್ತದೆ. ಇದಕ್ಕೂ ಸಂತಾನವೃದ್ಧಿಕ್ರಿಯೆಗೂ ಯಾವ ರೀತಿಯ ಸಂಬಂಧವೂ ಇಲ್ಲ.

ಪ್ರಾಣಿಗಳಲ್ಲಿ ಬಣ್ಣ ಕಾಣಿಸಿಕೊಳ್ಳಲು ಕಾರಣಗಳು: ಕೆಲವು ಸಂದರ್ಭಗಳಲ್ಲಿ ಪ್ರಕಟಗೊಳ್ಳುವ ಬಣ್ಣ ಜೀವಿಯ ದೇಹದಲ್ಲಿರುವ ರಾಸಾಯನಿಕ ವಸ್ತುವೊಂದನ್ನು ಅವಲಂಬಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಕಬ್ಬಿಣದ ಆಕ್ಸೈಡ್ ಕೆಂಪಾಗಿರುವುದರಿಂದ ಕಶೇರುಕಗಳ ರಕ್ತ ಕೆಂಪಾಗಿರುತ್ತದೆ. ಇದೇ ರೀತಿ ತಾಮ್ರದ ಆಕ್ಸೈಡ್ ನೀಲಹಸುರು ಬಣ್ಣದ್ದಾಗಿರುವುದರಿಂದ ಅಷ್ಟಪಾದಿಯ ರಕ್ತ ಅದೇ ಬಣ್ಣ ತಾಳುತ್ತದೆ. ಕೆಲವು ಸಂದರ್ಭಗಳಲ್ಲಿ ಪ್ರಾಣಿಯ ಒಳಗಿನ ಅಂಗಗಳು ಆಹಾರವನ್ನು ಅಸನುಸರಿಸಿ ಬೇರೆ ಬೇರೆ ಬಣ್ಣವನ್ನೂ ತೋರಬಹುದು. ಉದಾಹರಣೆಗೆ ಅಮೆರಿಕದ ಸಂಯುಕ್ತ ಸಂಸ್ಥಾನಗಳ ಮ್ಯಾಸಚೂಸೆಟ್ಸ್ ರಾಜ್ಯದ ಭಾಗದಲ್ಲಿ ವಾಸಿಸುವ ಟ್ರೌಟ್‍ಮೀನಿನ ಮಾಂಸ ಬೆಳ್ಳಗಿರುತ್ತದೆ. ಈ ಪ್ರದೇಶದಲ್ಲಿ ಕಠಿಣ ಚರ್ಮಿಗಳು ಹೆಚ್ಚಾಗಿ ದೊರಕುವುದಿಲ್ಲ. ಆದರೆ ನಳ್ಳಿಗಳು ಹೆಚ್ಚಾಗಿ ಸಿಕ್ಕುವ ಅಡಿರೋನ್‍ಡ್ಯಾಕ್ಸ್ ಸರೋವರದ ಟ್ರೌಟುಗಳ ಮಾಂಸ ಕಡುಕೆಂಪಾಗಿರುತ್ತದೆ. ಅನೇಕ ವೇಳೆ ಪ್ರಾಣಿಯ ವೈವಿಧ್ಯಕ್ಕೆ ಕಾರಣವಾಗುವ ವರ್ಣಕಗಳು ಪ್ರಾಥಮಿಕವಾಗಿ ತ್ಯಾಜ್ಯ ವಸ್ತುಗಳಾಗಿರಬಹುದು, ಸಂತತ ಉತ್ಪನ್ನಗಳಾಗಿರಬಹುದು. ಅಥವಾ ಪ್ರಾಣಿಯ ಉಪಾಪಚಯಕ್ರಿಯೆಯ ಉಪೋತ್ಪನ್ನಗಳಾಗಿರಬಹುದು. ಕಶೇರುಕಗಳಲ್ಲಿ ಮತ್ತು ಸೀಗಡಿ ಮುಂತಾದ ಕೆಲವು ಅಕಶೇರುಕಗಳಲ್ಲಿ ಬಣ್ಣ ತೊಡುಗೆಗೆ ಕಾರಣವಾಗುವ ಕ್ರೊಮ್ಯಾಟೊಫೋರುಗಳು ನರಮಂಡಲದ ನಿಯಂತ್ರಣಕ್ಕೆ ಒಳಪಟ್ಟಿರುವುವು. ನರಮಂಡಲ ಭಾಗದಲ್ಲಿ ಕಂಡು ಬರುವ ನರಸ್ರಾವಕ ಕೋಶಗಳ ಸ್ರಾವಿಕೆಗಳು ಸೀಗಡಿಗಳಲ್ಲಿ ಕ್ರೊಮ್ಯಾಟೊಫೋರುಗಳ ಸಂಕುಚನ ಮತ್ತು ವ್ಯಾಕೋಚನಗಳನ್ನು ನಿಯಂತ್ರಿಸುತ್ತವೆ. ಇದೇ ರೀತಿ ಕಶೇರುಕಗಳಲ್ಲಿ ಕಂಡುಬರುವ ಮೆಲನೊಫೋರುಗಳು ಹಾರ್ಮೋನುಗಳ ನಿಯಂತ್ರಣಕ್ಕೆ ಒಳಪಟ್ಟಿವೆ. ಪಿಟುಯಿಟರಿ ಗ್ರಂಥಿಯ ಮಧ್ಯಪಾಲಿ ಸ್ರವಿಸುವ ಒSಊ ಎಂಬ ಹಾರ್ಮೋನು, ಮೆಲನೊಫೋರುಗಳ ಸಂಕೋಚನವನ್ನು ನಿಯಂತ್ರಿಸುತ್ತದೆ.
(ಎಚ್.ಬಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ